ವ್ಯಕ್ತಿ ಪರಿಚಯ - ಮರೆಯಲಾಗದ ಮಹಿಳೆಯರು





  
ಹಲವು ಮಹಿಳೆಯರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಮನದಲ್ಲು ಇಂದಿಗೂ ಜೀವಂತವಾಗಿ ಉಳಿದಿದ್ದಾರೆ. ಅವರಲ್ಲಿ ಒಂದಿಬ್ಬರ ಬಗ್ಗೆ ನಿಮಗೆ ಹೇಳಲಿಚ್ಛಿಸುತ್ತೇನೆ.
1910 ಆಗಸ್ಟ್ 26 ರಂದು ನಿಕೋಲೆ ಮತ್ತು ಡ್ರಾನ್ ಫಿಲೆ ದಂಪತಿಗಳ ಮಗಳಾಗಿ ಸ್ಕೋಪಿಯಲ್ಲಿ ತೆರೆಸಾರವರು ಜನಿಸಿದರು. ತಂದೆಯ ಸಮಾಜಸೇವೆ, ತಾಯಿಯ ಮೃದು  ಸ್ವಭಾವಗಳಿಂದ ಪ್ರಭಾವಗೊಂಡರು. ಹೆತ್ತವರು ಇವರಿಗಿಟ್ಟ ಹೆಸರು ಆಗ್ನೆಸ್ ಗೂಂಕ್ಸಾ. ಆಗ್ನೆಸ್ ಎಂದರೆ " ಪರಿಶುದ್ಧ" ಗೂಂಕ್ಸಾ ಎಂದರೆ "ಹೂವೊಗ್ಗು" ಎಂದರ್ಥ.
   1928 ರಲ್ಲಿ ಆಗ್ನೆಸ್ "ಇನ್ಸ್‌ಟಿಟ್ಯೂಟ್ ಆಫ್ ದಿ ಬೆಸ್ಟ್ ವರ್ಜಿನ್ ಮೇರಿ" ಎಂಬ ಸಂಸ್ಥೆಗೆ ಸೇವಾವ್ರತಿಯಾಗಿ ಸೇರಿದರು. ಈ ಸಂಸ್ಥೆಯಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಸನ್ಯಾಸಿನಿದೀಕ್ಷೆಯನ್ನು ನೀಡಿ ತರಬೇತಿಯನ್ನು ಕೊಟ್ಟು  ಸೇವಾಕಾರ್ಯಕ್ಕಾಗಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಅದರಂತೆಯೇ 1929ರಲ್ಲಿ ಭಾರತಕ್ಕೆ ಕಾಲಿಟ್ಟ ಆಗ್ನೆಸ್ 1931ರಲ್ಲಿ ವೃತ್ತಿದೀಕ್ಷೆ ಮುಗಿಸಿದರು. ನಂತರ ಫ್ರೆಂಚ್ ಸಂತ ಮಹಿಳೆ ಲೇಡಿ ತೆರೆಸಾ ನೆನಪಿನಲ್ಲಿ ಸಿಸ್ಟರ್ ತೆರೆಸಾ ಎಂಬ ಅಭಿದಾನವನ್ನು ಆಗ್ನೆಸ್ ಗೆ ನೀಡಲಾಯಿತು. ನಂತರ ಕಲ್ಕತ್ತಾದಲ್ಲಿ ಶಿಕ್ಷಕಿಯಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದ ತೆರೆಸಾ ಕಡುಬಡವರ,ದೀನ ದಲಿತರ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು.
"ನಾನು ಅವರ ಹೊಟ್ಟೆ ಹಸಿವನ್ನು ಮಾತ್ರ ಕಂಡೆ ಅವರಿಗೆ ತಿನ್ನಲು ಬ್ರೆಡ್ ನೀಡಿದರೆ  ಸಾಕೆಂದುಕೊಂಡೆ,ಆದರೆ ಅವರ ಪ್ರೀತಿಯ ಹಸಿವು ಎಷ್ಟು ತೀವ್ರಸ್ವರೂಪದ್ದಾಗಿದೆ ಎಂದು ನನಗೆ ಕಾಣಲೇಬೇಕು ಇಲ್ಲವಲ್ಲ! ಇನ್ನು ಮುಂದೆ ನಾನು ಜನರ ಸೇವೆಯಲ್ಲಿ ತೊಡಗಿಸಿಕೊಂಡಾಗ ಅವರನ್ನು ಪ್ರೀತಿ ಗೌರವದಿಂದ ಕಾಣುವ ಭಾವನೆಯನ್ನು ಸೇರಿಸಬೇಕು" ಎಂದು ಧೃಡ ನಿರ್ಧಾರ ಮಾಡಿದರು ಅದರಂತೆ ನಡೆದರು ಕೂಡ. ಈ ನಿಟ್ಟಿನಲ್ಲಿಬೀದಿಯಲ್ಲಿ ಆಟವಾಡಿಗೊಂಡಿದ್ದ ಮಕ್ಕಳನ್ನೆಲ್ಲಾ ಒಂದುಗೂಡಿಸಿ  ಅವರಿಗೆ ಅಕ್ಷರ ಕಲಿಸುವ ಪ್ರಯತ್ನ ಮಾಡಿ ಯಶಸ್ವಿಯಾದರು.
1948 ರಲ್ಲಿ ಇವರು ತಮ್ಮ ವಿದೇಶಿ ಪೌರತ್ವವನ್ನು ತ್ಯಜಿಸಿ ಭಾರತದ ಪೌರತ್ವವನ್ನು ಸ್ವೀಕರಿಸಿದರು.  ನಂತರ 1950 ರಲ್ಲಿ " ಮಿಶನರೀಸ್ ಆಫ್ ಚಾರಿಟಿ " ಯನ್ನು ಸ್ಥಾಪಿಸಿದರು. ಇದರ ಮೂಲಕ ಹಲವಾರು ಸೇವಾಕೇಂದ್ರಗಳನ್ನು ಪ್ರಾರಂಭಿಸಿದರು. ಅದರಲ್ಲಿ  ನಿರ್ಮಲ ಸದನ,ಶಿಶುಭವನ ಮತ್ತು ಪ್ರೇಮನಿವಾಸ ಪ್ರಮುಖವಾದವು.
ಸಮಾಜದಲ್ಲಿ ಹಲವರ ದಾರುಣ ರೀತಿಯ ಅಂತ್ಯವನ್ನು ನೋಡಿದ ಇವರು ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಅನಿವಾರ್ಯ,ಅದಕ್ಕೆ ವಯಸ್ಸು, ಜಾತಿ,ಮತ ದೇಶದ ಮಿತಿಯಿಲ್ಲ ಆದರೆ ಮನುಜರಿಗೆ ಸಾವನ್ನು ಶಾಂತಿಯಿಂದ ಸ್ವಾಗತಿಸುವ ಸ್ಥಿತಿ ಬೇಕು ಎಂದು , ಅದಕ್ಕಾಗಿ 1950 ರಲ್ಲಿ ನಿರ್ಮಲ ಹೃದಯವನ್ನು ಪ್ರಾರಂಭಿಸಿದರು.
ಮಕ್ಕಳೆಂದರೆ ಇವರಿಗೆ ಅಪರಿಮಿತ ಪ್ರೀತಿ. ಅನಾಥ ಮಕ್ಕಳು, ರೋಗಪೀಡಿತರು ಹಾಗೂ ಮತಿಹೀನರು ಇಂತಹ ಮಕ್ಕಳಿಗಾಗಿ ನಿರ್ಮಲ ಶಿಶು  ಭವನವನ್ನು ಸ್ಥಾಪಿಸಿದರು.
ನಂತರ ತೆರೆಸಾರವರು ಕುಷ್ಠರೋಗಿಗಳತ್ತ ತಮ್ಮ ಗಮನ ಹರಿಸಿ ಅವರ ಸೇವೆಗಾಗಿ ಪ್ರೇಮನಿವಾಸ ಮತ್ತು ಶಾಂತಿನಗರವನ್ನು ಸ್ಥಾಪಿಸಿದರು.
ತೆರೆಸಾರವರು ಭಾರತವಲ್ಲದೆ ವಿಶ್ವದ ಹಲವೆಡೆ ತಮ್ಮ ಸೇವಾಕೇಂದ್ರಗಳನ್ನು ಸ್ಥಾಪಿಸಿದರು.
ಇವರು ತಮ್ಮ ನಿಸ್ವಾರ್ಥ ಸೇವೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದರು. ನೊಂದವರ ಆಶಾಕಿರಣವಾಗಿ ಬಂದ ತೆರೆಸಾ ತಮ್ಮ ನಿರ್ಮಲ ಮನಸ್ಸಿನ ಸೇವಾಮನೋಭಾವದಿಂದ ತಾಯಿ ತೆರೆಸಾರಾಗಿ ಎಲ್ಲರ ಮನದಲ್ಲಿ ಉಳಿದುಕೊಂಡಿದ್ದಾರೆ.



ಸಾವಿತ್ರಿಬಾಯಿ ಫುಲೆ

    ಎಲ್ಲರ ಮನದಲ್ಲಿ ಉಳಿಯುವ ಮತ್ತೋರ್ವ ಮಹಿಳೆಯೆಂದರೆ ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ.1831 ರಲ್ಲಿ ಮಹಾರಾಷ್ಟ್ರದ ನಾಯಂಗಾವಿನ ಖಂಡೋಜಿ ನೆವಶೆ ಪಾಟೀಲರ ಮಗಳಾಗಿ ಸಾವಿತ್ರಿಯವರು ಜನಿಸಿದರು. ಅಂದಿನ ಪದ್ಧತಿಯಂತೆ 9 ವರ್ಷದ ಬಾಲೆಗೆ ಫುಲೆ ಮನೆತನದ ಜ್ಯೋತಿಬಾ ರವರ ಜೊತೆ ವಿವಾಹವಾಯಿತು. ನಂತರ ಪತಿ ಜ್ಯೋತಿಬಾರವರು ಶಾಲೆಗೆ ಹೋಗದ ಸಾವಿತ್ರಿಯವರಿಗೆ ಅಕ್ಷರ ಕಲಿಸಿದರು. ಮುಂದೆ ಶಿಕ್ಷಕ ತರಬೇತಿಯನ್ನು ಕೊಡಿಸಿ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾಗಲು ಕಾರಣರಾದರು. ವಿದ್ಯೆ ಎನ್ನುವುದು ಮೇಲ್ವರ್ಗದವರಿಗೆ ಮಾತ್ರ ಎನ್ನುವಂತಿದ್ದ ಕಾಲದಲ್ಲಿ ಜಾತಿಭೇದ ಇಲ್ಲದೆ ಎಲ್ಲಾ ವರ್ಗದವರಿಗೂ ವಿದ್ಯೆ ಕಲಿಸಲು ಮುಂದಾದರು. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಿದರು. ಇದಕ್ಕಾಗಿ ಹಲವಾರು ಕಷ್ಟಗಳನ್ನು ಎದುರಿಸಿದರು. ದೇಶ ಸುಧಾರಣೆಯಾಗಬೇಕಾದರೆ ಮಹಿಳೆಯರು ವಿದ್ಯಾವಂತರಾಗಬೇಕು  ಎಂದು ತಿಳಿದ ಫುಲೆ ದಂಪತಿಗಳು ಹೆಣ್ಣುಮಕ್ಕಳಿಗಾಗಿಯೇ ಶಾಲೆಯನ್ನು ಪ್ರಾರಂಭಿಸಿದರು. ಹಾಗೆಯೇ ಜನರನ್ನು ಎಚ್ಚರಿಸಿ ಅರಿವು ಮೂಡಿಸುವಂತಹ ಕವಿತೆಗಳನ್ನು ಸಾವಿತ್ರಿಯವರು ಬರೆಯುತ್ತಿದ್ದರು.
ಇವರು ಮಹಿಳೆಯರನ್ನು ಸಂಘಟಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಈ ನಿಟ್ಟಿನಲ್ಲಿ 1852 ರಲ್ಲಿ " ಮಹಿಳಾ ಸೇವಾ ಮಂಡಲ" ಪ್ರಾರಂಭವಾಯಿತು. ಅಂದಿನ ಕಾಲದಲ್ಲಿ ವಿಧವೆಯರು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಿದ ಇವರು ಅದರ ವಿರುದ್ಧವೂ ದನಿಯೆತ್ತಿದ್ದರು. ಅಂದು ವಿಧವೆಯರು  ಪುರುಷರ ದುರಾಸೆಗೆ ಬಲಿಯಾಗಿ ಗರ್ಭವತಿಯಾಗುತ್ತಿದ್ದರು ನಂತರ ಸಮಾಜವನ್ನು ಎದುರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇಂತಹ ವಿಧವೆಯರಿಗೆ ಸಾವಿತ್ರಿಯವರು ತಮ್ಮ ಮನೆಯಲ್ಲೇ ಆಶ್ರಯ ನೀಡುತ್ತಿದ್ದರು. ಹಾಗೂ ಬ್ರಾಹ್ಮಣ ವಿಧವೆಯೊಬ್ಬಳಿಗೆ ಮರುಮದುವೆಯನ್ನು ಮಾಡಿಸಿದರು. ಜಾತಿಪದ್ಧತಿಯನ್ನು ಹೋಗಲಾಡಿಸಿ ಎಲ್ಲರೂ ಸಮಾನರು ಎನ್ನವ " ಸತ್ಯಶೋಧಕ" ಸಮಾಜವನ್ನು ಪ್ರಾರಂಭಿಸಿದರು. ಜ್ಯೋತಿಬಾರವರು ಮೊದಲ ಅಧ್ಯಕ್ಷರಾದರು. ಮಹಿಳೆಯರ ವಿಭಾಗಕ್ಕೆ ಸಾವಿತ್ರಿಬಾಯಿಯವರು ಅಧ್ಯಕ್ಷೆಯಾದರು. ಇಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಸದಸ್ಯತ್ವವನ್ನು ಕೊಡಲಾಗುತ್ತಿತ್ತು. ಈ ಸಂಸ್ಥೆಯಿಂದ ಪುರೋಹಿತರಿಲ್ಲದೆ, ವರದಕ್ಷಿಣೆಯಿಲ್ಲದೆ ಸರಳವಿವಾಹ ಪದ್ಧತಿಯನ್ನು ಪ್ರಾರಂಭಿಸಿದರು. ಅಲ್ಲದೆ ಅಂತರ್ಜಾತೀಯ ವಿವಾಹವನ್ನು ಇವರು ಪ್ರೋತ್ಸಾಹಿಸಿತ್ತಿದ್ದರು. ಇಷ್ಟೆಲ್ಲಾ ಸುಧಾರಣೆಗಳನ್ನು ತರುವಲ್ಲಿ ಹಲವರ ಕೋಪಕ್ಕೆ ಗುರಿಯಾಗಿದ್ದರು. ಆದರೂ ಎದೆಗುಂದದೆ ಎಲ್ಲವನ್ನು ಧೈರ್ಯದಿಂದಲೇ ಎದುರಿಸಿದ್ದರು.
ಹೀಗೆ ಅಕ್ಷರ ಕ್ರಾಂತಿಯನ್ನು ಆರಂಭಿಸಿ ಸಮಾಜದ ಅತ್ಯಂತ ಕೆಳಮಟ್ಟದ ಮಹಾರ್ ಮಾಂಗರಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿ ಯಶಸ್ವಿಯಾದರು. ಹಲವಾರು ಸಮಾಜಸೇವೆಯನ್ನು ಮಾಡಿದಂತಹ ಇವರು ಪ್ಲೇಗ್ ಕಾಯಿಲೆಯಿಂದ 1897 ರ ಮಾರ್ಚ್ 10 ರಂದು ನಿಧನರಾದರು. ತಾವು ಹೊತ್ತಿಸಿದ ಅಕ್ಷರ ಜ್ಯೋತಿಯಿಂದ ಇಂದು ಸಹ ಎಲ್ಲರ ಮನದಲ್ಲಿ ಬೆಳಕಾಗಿ ಉಳಿದಿದ್ದಾರೆ ಸಾವಿತ್ರಿಬಾಯಿ ಫುಲೆಯವರು.





    ಇಂದಿಗೂ ಭಾರತೀಯರ ಮನದಲ್ಲಿ ಉಳಿದಿರುವ ಇನ್ನೋರ್ವ ಮಹಿಳೆಯೆಂದರೆ ಕ್ರಾಂತಿ ಮಾತೆ ಎನಿಸಿಕೊಂಡ ಮೇಡಂ ಕಾಮಾರವರು. 1861 ರಲ್ಲಿ ಮುಂಬಯಿಯಲ್ಲಿ ಶ್ರೀಮಂತ ಕುಟುಂಬದಲ್ಲಿ ಇವರು ಜನಿಸಿದರು. ಬಾಲ್ಯದಲ್ಲಿ  ತಂದೆಯ ಗೆಳೆಯರು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಚರ್ಚಿಸುತ್ತಿದ್ದದ್ದು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಬಾಲ್ಯದಿಂದಲೂ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು.  ನಂತರ ಶ್ರೀಮಂತ ವಾಣಿಜ್ಯೋದ್ಯಮಿ ರುಸ್ತುಂ ಕಾಮಾರೊಂದಿಗೆ ವಿವಾಹವಾಯಿತು. ಬ್ರಿಟಿಷರ ಬಗ್ಗೆ ಒಲವಿದ್ದ ಪತಿ ಮತ್ತು ಬ್ರಿಟಿಷರ ದ್ವೇಷಿಯಾಗಿದ್ದ ಇವರು ಜೊತೆಗಿರಲಾರದೆ ವಿಚ್ಛೇದನೆಯನ್ನು ಪಡೆದುಕೊಂಡರು. ನಂತರ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಯೂರೋಪ್ ರಾಷ್ಟ್ರಕ್ಕೆ ಹೋದರು. ಗುಣವಾದ ನಂತರ ಜರ್ಮನಿ,ಫ್ರಾನ್ಸ್,ಮೊದಲಾದ ರಾಷ್ಟ್ರಗಳಲ್ಲಿ ಸಂಚರಿಸಿ ಲಂಡನ್ ನಲ್ಲಿ ನೆಲಸಿದರು. ಇಲ್ಲಿ ದಾದಾಬಾಯಿ ನವರೋಜಿಯವರ ಆಪ್ತಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಇದರಿಂದ  ಸ್ವಾತಂತ್ರ್ಯ ಚಳವಳಿಯ ಬೆಳವಣಿಗೆಯನ್ನು ತಿಳಿಯಲು ಸಾಧ್ಯವಾಯಿತು. ನಂತರ ಭಾರತದ ಕ್ರಾಂತಿಕಾರಿಗಳ ಕೇಂದ್ರವಾಗಿದ್ದ  "ಇಂಡಿಯನ್ ಹೌಸ್" ಗೆ ಕಾಲಿರಿಸಿದರು. ಎಲ್ಲರಿಗು ಸ್ಫೂರ್ತಿದಾಯಕ ಮಾತುಗಳನ್ನಾಡಿ ಕಾಮಾರವರು ಕ್ರಾಂತಿಮಾತೆಯಾದರು. 1905 ಮೇ 10 ರಲ್ಲಿ ಇಂಡಿಯಾ ಹೌಸ್ ನಲ್ಲಿ 1857 ರ ಸಂಗ್ರಾಮದ ಸುವರ್ಣ ಮಹೋತ್ಸವವನ್ನು ಮೇಡಂ ಕಾಮಾರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. 1907 ರಲ್ಲಿ ಜರ್ಮನಿಯಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನಕ್ಕೆ ಮೇಡಂ ಕಾಮಾರವರನ್ನು ಭಾರತದ ಪರವಾಗಿ ವಿಚಾರಗಳನ್ನು  ತಿಳಿಸಲು ಕಳುಹಿಸಲಾಯಿತು. ಆ ಸಮ್ಮೇಳನದಲ್ಲಿ ಭಾರತದಲ್ಲಿ ಬ್ರಿಟಿಷರ ದಬ್ಬಾಳಿಕೆ ದೌರ್ಜನ್ಯದ ಬಗ್ಗೆ  ಮಾತನಾಡುತ್ತಿದ್ದಂತೆಯೇ ತಮ್ಮಲ್ಲಿದ್ದ ಭಾರತದ ಧ್ವಜವನ್ನು ಹಾರಿಸಿದರು ಮತ್ತು  ಸಭಿಕರಿಗೆ ಈ ಪವಿತ್ರ ದ್ವಜಕ್ಕೆ ವಂದಿಸಿ ಎನ್ನುತ್ತಾ ಭಾರತದ ವಿಮೋಚನೆಗೆ ಕೈ ಜೋಡಿಸಿ ಎಂದು ಹೇಳಿದರು. 1908 ರಲ್ಲಿ ಲಂಡನ್ನಿನಲ್ಲಿ  ಭಾಷಣ ಮಾಡುತ್ತಾ ಯುವಕರಿಗೆ " ಬ್ರಿಟಿಷರು ಎಷ್ಟೇ ದೊಡ್ಡ ಹುದ್ದೆ ಕೊಟ್ಟರೂ ನಿರಾಕರಿಸಿ,ಅವರನ್ನು ಓಲೈಸಬೇಕಾಗಿಲ್ಲ. ಭಾರತ ನಮ್ಮದು ಸ್ವತಂತ್ರ ಜೀವನವನ್ನು ರೂಢಿಸಿಕೊಳ್ಳಿ " ಎಂದು ಸಂದೇಶ ನೀಡಿದರು. ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಇವರನ್ನು  ದೇಶ ಬಿಟ್ಟು ಹೋಗುವಂತೆ ಆದೇಶಿಸಿತು ಅಲ್ಲದೆ ಭಾರತಕ್ಕೂ ಹೋಗದಂತೆ ತಿಳಿಸಿತು.
  ನಂತರ ಫ್ರಾನ್ಸ್ ನಲ್ಲಿ ನೆಲೆಸಿದರು ಮೇಡಂ ಕಾಮಾರವರು. ಇಲ್ಲಿಯೂ ಸಹ ಹಲವು ಕ್ರಾಂತಿಕಾರಿಗಳೊಂದಿಗೆ ಸೇರಿ " ವಂದೇ ಮಾತರಂ " ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಪ್ರಥಮ ಮಹಾಯುದ್ಧದಲ್ಲಿ ತಟಸ್ಥರಾಗಿರಬೇಕೆಂದು ಕರೆ ನೀಡಿದರು. ಭಾರತೀಯರಲ್ಲದೆ ಈಜಿಪ್ಟ್,ಚೀನಾ ಟರ್ಕಿ  ಮೊದಲಾದ ರಾಷ್ಟ್ರದ ಜನತೆಯ ಪ್ರೀತಿ ಪಾತ್ರರಾದರು. ಮೇಡಂ ಕಾಮಾರವರು ವಯಸ್ಸಾದಂತೆ ಆರೋಗ್ಯವು ಹದಗೆಟ್ಟಿದ್ದರಿಂದ ತಾಯ್ನಾಡಿಗೆ ಹಿಂದಿರುಗಲು ಆಶಿಸಿದರು. ಚಳವಳಿಗಳಲ್ಲಿ ಭಾಗವಹಿಸಬಾರದು ಮತ್ತು ಕ್ರಾಂತಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಬಾರದೆಂದು ಷರತ್ತುಗಳನ್ನು  ಹಾಕಿ ಭಾರತಕ್ಕೆ ಬರಲು ಅವಕಾಶ ನೀಡಲಾಯಿತು.
ಹೀಗೆ ಸುಮಾರು 34 ವರ್ಷಗಳ ಕಾಲ ವಿದೇಶದಲ್ಲಿದ್ದುಕೊಂಡೇ ಸ್ವಾತಂತ್ರ್ಯಕ್ಕಾಗಿ ಹೊರಟ ನಡೆಸಿದ ಮೇಡಂ ಕಾಮಾರವರು 1936 ರಲ್ಲಿ ಅಸು ನೀಗಿದರು. ಕ್ರಾಂತಿಕಾರರಿಗೆ ತಮ್ಮ ಸ್ಫೂರ್ತಿಯ ಸೆಲೆಯಾಗಿದ್ದ ಮೇಡಂ ಕಾಮಾರವರು ಕ್ರಾಂತಿಮಾತೆಯಾಗಿ ಎಲ್ಲರ ಮನದಲ್ಲೂ ಇಂದಿಗೂ ಉಳಿದಿದ್ದಾರೆ.

Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು