ಪುಟಾಣಿ ಕಥೆ 1-10


ಪುಟಾಣಿ ಕಥೆ -
ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಲು ನಿರ್ಧಾರ ಮಾಡಿ ಹೊರಟವನು, ದಾರಿಯಲ್ಲೊಬ್ಬನು, ಹೊಸದಾಗಿ ಕೊಂಡ "ಚಪ್ಪಲಿಗಳನ್ನು" ನೋಡಿ ಹಾಗೆ ನಿಂತ!!

ಪುಟಾಣಿ ಕತೆ -
ಆಗ ತಾನೆ ಜನಿಸಿದ ಹೆಣ್ಣುಮಗುವನ್ನು ಕಂಡು ಮುಖ ತಿರುಗಿಸಿದ ಅಪ್ಪನನ್ನು ಕಂಡ ಮಗು, "ಮಾಡದ ತಪ್ಪಿಗೆ ಶಿಕ್ಷೆಯೆ?" ಎಂದು ಅಮ್ಮನೆಡೆಗೆ ನೋಡಿತು!!

ಪುಟಾಣಿ ಕಥೆ - 
ವೃದ್ಧಾಶ್ರಮಕ್ಕೆ ಅಪ್ಪನನ್ನು ಬಿಟ್ಟು ಬಂದ ಮಗನನ್ನು ಅವನ ಪುಟ್ಟ ಮಗ ಕೇಳಿದ "ನಾನು ದೊಡ್ಡವನಾಗುವುದು ಯಾವಾಗ?"

ಪುಟಾಣಿ ಕಥೆ - 
ದೇವರಿಗೆಂದು ಬಗೆಬಗೆಯ ತಿನಿಸುಗಳನ್ನು ಮಾಡುತಿದ್ದ ಅಜ್ಜಿಯನ್ನು, ಅಲ್ಲಿಯೆ ಇದ್ದ ಮೊಮ್ಮಗು ಕೇಳಿತು "ಮಕ್ಕಳೆ ದೇವರಲ್ಲವೆ ಅಜ್ಜಿ?"

ಪುಟಾಣಿ ಕಥೆ - 
ಜೀವನದ ಬೇಕು,ಬೇಡಆಗುಹೋಗುಗಳ  ಬಗ್ಗೆ ತಿಳಿಸುತಿದ್ದವಳಿಗೆ ನಗುತ್ತಾ ತಣ್ಣಗೆ ಹೇಳಿದಳು ಗೆಳತಿ "ನೀನೊಬ್ಬಳು ಜೊತೆಗಿದ್ದರೆ ಸಾಕು!"

ಪುಟಾಣಿ ಕಥೆ - 
ಮಗನ ತುಂಟತನವನ್ನ ತಡೆಯಲಾಗದ ಅಮ್ಮ ಮಗನನ್ನು ಬೈಯಲು, ಮಗ ನಗುತ್ತಾ "ಅಜ್ಜಿ ನಿನ್ನನ್ನು ಬೈಯ್ದಿದ್ದರಂತೆ"ಎಂದನು!!

ಪುಟಾಣಿ ಕಥೆ - 
ಕೈಲಾಗದು ಎಂದು ಕೈಚೆಲ್ಲಿ  ಕೂತವಳು, ಅಲ್ಲೆ ಮೂಲೆಯಲ್ಲಿ ಕೆಳಗೆ ಬಿದ್ದ ಜೇಡವೊಂದು ಪುನಃ ಮೇಲೇರಿ ಬಲೆ ನೇಯುವುದ ಕಂಡು ಮತ್ತೆ ತಯಾರಾದಳು.

ಪುಟಾಣಿ ಕಥೆ - 
ಹೈಟೆಕ್ ಹಿರಿಯರ ಆಶ್ರಮವನ್ನು ಕಟ್ಟಿಸಿ ಉದ್ಘಾಟನೆ ಮಾಡಿ, ಭಾಷಣ ಮಾಡುತ್ತಿದ್ದವನಿಗೆ ತನ್ನ ತಂದೆ ತಾಯಿಯನ್ನು ಮಾತನಾಡಿಸಲು ಸಮಯವೇ ಇರಲಿಲ್ಲ!!

ಪುಟಾಣಿ ಕಥೆ - 
ವರದಕ್ಷಣಿಯಾಗಿ ತವರಿನಿಂದ ಚಿನ್ನವನ್ನು ತೆಗೆದುಕೊಂಡು ಬರಲು ಹಿಂಸಿಸುತ್ತಿದ್ದ ಗಂಡನ ವರ್ತನೆಯಿಂದ ಬೇಸರಗೊಂಡು ಯೋಚಿಸುತ್ತಿದ್ದವಳಿಗೆ, ಮದುವೆಯ ಮುಂಚಿನ ಅವನ ಮಾತುಗಳಾದ "ನೀನೆ ಚಿನ್ನ, ರನ್ನ"ಎಂಬುದು ಈಗ ತಿಳಿಯಿತು!!

ಪುಟಾಣಿ ಕಥೆ - ೧೦
ಒಂದೊತ್ತಿನ  ಊಟಕ್ಕೂ ಕಷ್ಟ ಪಡುವರು ಹಣವಿಲ್ಲದೆ ಕೈಯಲ್ಲಿ ಹಲವರು
ಹಣವಿದ್ದರೂ ಊಟಕ್ಕೆ ಪರದಾಡುತ್ತಿರುವರು  "ಚಿಲ್ಲರೆ"ಇಲ್ಲದೆ ಕೆಲವರು!!
(ಹಳೆಯ ನೋಟು ಬದಲಾವಣೆಯ ಸಮಯದಲ್ಲಿ ಬರೆದದ್ದು )

Comments