ಪುಟಾಣಿ ಕಥೆ 41-50
ಪುಟಾಣಿ ಕಥೆ - ೪೧
ಸಣ್ಣಗಾಗಲು "ವಾಕಿಂಗ್, ವ್ಯಾಯಾಮ" ಎಂದೆಲ್ಲಾ
ಮಾಡುವರು. ಆದರೆ ಸಣ್ಣಗಾದವರನ್ನು "ಯಾಕ್ಹೀಗೆ?" ಎಂದು ಕೇಳುವರು. ಜನರೇಕೆ ಹೀಗೆ ಎಂದು ಅವಳಿಗೆ ಯಾವಾಗಲೂ ಪ್ರಶ್ನೆ!!
ಪುಟಾಣಿ ಕಥೆ - ೪೨
ಹೆಣ್ಣು ಮಗುವಾಯಿತೆಂದು ಚಿಂತಿಸುತ್ತಿದ್ದ ಆತ. “ಅಜ್ಜಿ ಮತ್ತು ಅಮ್ಮ ಇಬ್ಬರೂ
ಹೆಣ್ಣಲ್ಲವೇನಪ್ಪ? ನಿನಗೆ ಅಮ್ಮ ಬೇಕು, ಮಡದಿ ಬೇಕು, ಆದರೆ ಹೆಣ್ಣು ಮಗಳು ಮಾತ್ರ ಬೇಡವೇನಪ್ಪ??" ಕೇಳಿದ ಮಗ.
ಪುಟಾಣಿ ಕಥೆ - ೪೩
ಮಾತು ಮೌನದ ಜೊತೆ ಹೇಳಿತು "ನಾ ನಿನ್ನಂತೆ ಇರಬೇಕು" ಎಂದು. "ಮಾತಿನಿಂದ ಮೌನಕ್ಕೆ ಅರ್ಥ, ಮೌನದಿಂದ ಮಾತಿಗೆ ಬೆಲೆ. ಎರಡು ಒಂದರ ಜೊತೆ ಒಂದಿದ್ದರೆ ಅರ್ಥ ಇಲ್ಲದಿರೆ ಅನರ್ಥ" ಎಂದಿತು ಮೌನ.
ಪುಟಾಣಿ ಕಥೆ - ೪೪
ಆಸ್ಪತ್ರೆಯಲ್ಲಿ ಮಲಗಿದ್ದ ಮಡದಿಗೆ "ಒಂದು ಗಂಡುಮಗುವನ್ನು ಹಡೆಯಲಾಗಲಿಲ್ಲ ನಿನಗೆ, ಎಲ್ಲದಕ್ಕು ನೀನೆ ಕಾರಣ" ಎಂದು ನಿಂದಿಸುತ್ತಿದ್ದ ಆತ. " ಅದಕ್ಕೆ ಕಾರಣ ನೀನು, ಅವಳಲ್ಲ" ಎಂದರು ಅಲ್ಲಿಯೇ ಇದ್ದ ವೈದ್ಯರು!!
ಪುಟಾಣಿ ಕಥೆ - ೪೫
"ಇನ್ನು ಮಗುವಾಗಿಲ್ಲ" ಎಂದು ಯಾವಾಗಲು ಚುಚ್ಚು ಮಾತಮಾಡುತ್ತಿದ್ದಳು ಅತ್ತೆ. "ಮಗನನ್ನು ಹಡೆದ ನೀವು ನೆಮ್ಮದಿಯಿಂದ ಇರುವಿರಾ ಅತ್ತೆ??" ಎಂದು ತನ್ನ ಕುಡುಕ ಗಂಡನನ್ನು ನೆನೆಯುತ್ತಾ ಕೇಳಿದಳು.
ಪುಟಾಣಿ ಕಥೆ - ೪೬
ಮಾತು ಮೌನದ ನಡುವೆ ಸ್ನೇಹ ಬೆಳೆಯಿತು. "ನಾನೇ ಚೆಂದ ಎಂದುಕೊಂಡಿದ್ದೆ, ನೀನು ಇಷ್ಟೊಂದು ಚೆಂದ ಎಂದು ಈಗಲೇ ತಿಳಿದಿದ್ದು" ಪರಸ್ಪರ ಹೇಳಿಕೊಂಡವು.
ಪುಟಾಣಿ ಕಥೆ - ೪೭
ಪದಕದೊಂದಿಗೆ ಬಂದ ಮಗಳು " ನಾನೆ ಶಾಲೆಗೆ ಮೊದಲಿಗಳಮ್ಮ" ಎಂದು ಖುಷಿಯಿಂದ ಹೇಳಿದಳು. “ನನ್ನ ಪುತ್ರವ್ಯಾಮೋಹವನ್ನು ಬಿಡಿಸಿ ಕಣ್ಣು ತೆರೆಸಿದೆ ಕಂದ " ಎಂದು ನುಡಿದಳು ಮಗಳನ್ನು ಅಪ್ಪಿ ಅಮ್ಮ!!"
ಪುಟಾಣಿ ಕಥೆ - ೪೮
"ಡ್ರೆಸ್ ಸರಿಯಾಗಿ ಹಾಕಿದ್ದರೆ ಅವರು ಛೇಡಿಸುತ್ತಿರಲಿಲ್ಲ" ಎಂದು ನೊಂದ ತಾಯಿ ಹೇಳಿದಳು ಮಗಳಿಗೆ.
"ನೀನು ಸೀರೆ ಹಾಕಿದ್ದಾಗಲೆ ಅಲ್ವಮ್ಮ ನಡೆದದ್ದು?" ಅಳುತ್ತಾ ಕೇಳಿದಳು ಮಗಳು!!
ಪುಟಾಣಿ ಕಥೆ - ೪೯
"ಮದ್ಯಪಾನ, ದುಷ್ಪರಿಣಾಮ ಮತ್ತು
ಅದರ ನಿಷೇಧದ
ಬಗ್ಗೆ ನಿರರ್ಗಳವಾಗಿ
ಮಾತನಾಡುತ್ತಿದ್ದನು ವೇದಿಕೆಯಲ್ಲಿ ಆತ. ಸಂಜೆ ಮನೆಗೆ ಬದಲಾಗಿ "ಹೊಸವರ್ಷದ ಪಾರ್ಟಿ "ಎಂದು ಬಾರ್ ಕಡೆಗೆ ನಡೆದನು!!!
ಪುಟಾಣಿ ಕಥೆ - ೫೦
'ಆಹಾರದಲ್ಲಿ ರಾಸಾಯನಿಕ ಪದಾರ್ಥಗಳ ಕಲಬೆರಕೆ ಆರೋಗ್ಯಕ್ಕೆ ಹಾನಿ' ಎನ್ನುತ್ತಿದ್ದಳು ಆಕೆ.
"ನೀವು ಉಪಯೋಗಿಸುತ್ತಿರುವ ಸೌಂದರ್ಯವರ್ಧಕ ಸಾಧನಗಳಲ್ಲಿರುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲವೆ?" ಕೇಳಿದಳು ಗೆಳತಿ!!
Comments
Post a Comment